28
ಸುಳ್ಳುಪ್ರವಾದಿಯಾದ ಹನನ್ಯನು
1 ಯೆಹೂದದಲ್ಲಿ ಚಿದ್ಕೀಯನ ಆಳ್ವಿಕೆಯ ನಾಲ್ಕನೇ ವರ್ಷದ ಐದನೇ ತಿಂಗಳಲ್ಲಿ ಹನನ್ಯನೆಂಬ ಪ್ರವಾದಿಯು ನನ್ನೊಂದಿಗೆ ಮಾತನಾಡಿದನು. ಹನನ್ಯನು ಅಜ್ಜೂರನ ಮಗ, ಹನನ್ಯನು ಗಿಬ್ಯೋನ್ ಊರಿನವನು. ನನ್ನೊಂದಿಗೆ ಮಾತನಾಡಿದಾಗ ಅವನು ಯೆಹೋವನ ಆಲಯದಲ್ಲಿದ್ದನು. ಯಾಜಕರು ಮತ್ತು ಸಮಸ್ತ ಜನರು ಅಲ್ಲಿದ್ದರು. ಹನನ್ಯನು ಹೀಗೆ ಹೇಳಿದನು:
2 “ಸರ್ವಶಕ್ತನೂ ಇಸ್ರೇಲರ ದೇವರೂ ಆಗಿರುವ ಯೆಹೋವನು ಹೇಳುವನು: ‘ಯೆಹೂದ್ಯರ ಮೇಲೆ ಬಾಬಿಲೋನಿನ ರಾಜನು ಹೊರಿಸಿದ ನೊಗವನ್ನು ನಾನು ಮುರಿದುಹಾಕುವೆನು.
3 ಎರಡು ವರ್ಷಗಳೊಳಗಾಗಿ, ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಹೋವನ ಆಲಯದಿಂದ ತೆಗೆದುಕೊಂಡು ಹೋದ ಎಲ್ಲಾ ವಸ್ತುಗಳನ್ನು ಹಿಂದಕ್ಕೆ ತರುವೆನು. ನೆಬೂಕದ್ನೆಚ್ಚರನು ಆ ವಸ್ತುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗಿದ್ದಾನೆ. ಆದರೆ ನಾನು ಆ ವಸ್ತುಗಳನ್ನು ಜೆರುಸಲೇಮಿಗೆ ತರುತ್ತೇನೆ.
4 ನಾನು ಯೆಹೂದದ ರಾಜನಾದ ಯೆಹೋಯಾಕೀನನನ್ನು ಇಲ್ಲಿಗೆ ಕರೆದುಕೊಂಡು ಬರುತ್ತೇನೆ. ಯೆಹೋಯಾಕೀನನು ಯೆಹೋಯಾಕೀಮನ ಮಗನು. ನೆಬೂಕದ್ನೆಚ್ಚರನು ಬಾಬಿಲೋನಿಗೆ ತೆಗೆದುಕೊಂಡು ಹೋದ ಎಲ್ಲಾ ಯೆಹೂದ್ಯರನ್ನು ನಾನು ಮತ್ತೆ ಕರೆದುಕೊಂಡು ಬರುತ್ತೇನೆ. ಬಾಬಿಲೋನಿನ ರಾಜನು ಯೆಹೂದದ ಜನರ ಮೇಲೆ ಹೇರಿದ ನೊಗವನ್ನು ನಾನು ಮುರಿದುಹಾಕುತ್ತೇನೆ.’ ” ಇದು ಯೆಹೋವನ ಸಂದೇಶ.
5 ಪ್ರವಾದಿಯಾದ ಯೆರೆಮೀಯನು ಪ್ರವಾದಿಯಾದ ಹನನ್ಯನಿಗೆ ಹೀಗೆ ಉತ್ತರ ಕೊಟ್ಟನು. ಅವರು ಯೆಹೋವನ ಆಲಯದಲ್ಲಿ ನಿಂತಿದ್ದರು. ಯಾಜಕರೂ ಮತ್ತು ಅಲ್ಲಿಯ ಸಮಸ್ತ ಜನರು ಯೆರೆಮೀಯನ ಉತ್ತರವನ್ನು ಕೇಳಿಸಿಕೊಂಡರು.
6 ಯೆರೆಮೀಯನು ಹನನ್ಯನಿಗೆ, “ಹಾಗೆಯೇ ಆಗಲಿ, ನೀನು ಹೇಳಿದಂತೆ ಯೆಹೋವನು ಮಾಡಲಿ. ನೀನು ಪ್ರವಾದಿಸಿದ ಸಂದೇಶವನ್ನು ಯೆಹೋವನು ನಿಜವಾಗುವಂತೆ ಮಾಡುವನೆಂದು ನಾನು ಆಶಿಸುತ್ತೇನೆ. ಯೆಹೋವನು ಬಾಬಿಲೋನಿನಿಂದ ತನ್ನ ಆಲಯದ ವಸ್ತುಗಳನ್ನು ಇಲ್ಲಿಗೆ ತರುವನೆಂದು ನಾನು ಆಶಿಸುವೆ. ತಮ್ಮ ಮನೆಗಳನ್ನು ಬಿಟ್ಟುಹೋಗಲು ಒತ್ತಾಯಿಸಲ್ಪಟ್ಟ ಜನರನ್ನು ಮತ್ತೆ ಯೆಹೋವನು ಇಲ್ಲಿಗೆ ಕರೆತರುವನೆಂದು ನಾನು ಆಶಿಸುವೆ.
7 “ಹನನ್ಯನೇ, ನಾನು ಹೇಳಬೇಕಾದುದನ್ನು ಕೇಳು. ಸಮಸ್ತ ಜನರಿಗೆ ನಾನು ಹೇಳಬೇಕಾದುದನ್ನು ಕೇಳು.
8 ಹನನ್ಯನೇ, ನಾನು ಮತ್ತು ನೀನು ಪ್ರವಾದಿಗಳಾಗುವದಕ್ಕಿಂತ ಬಹಳ ಮುಂಚೆ ಪ್ರವಾದಿಗಳು ಇದ್ದರು. ಯುದ್ಧ, ಹಸಿವು ಮತ್ತು ಭಯಂಕರವಾದ ವ್ಯಾಧಿಗಳು ಅನೇಕ ದೇಶಗಳಿಗೆ ಮತ್ತು ದೊಡ್ಡದೊಡ್ಡ ರಾಜ್ಯಗಳಿಗೆ ಬರುತ್ತವೆ ಎಂದು ಅವರು ಪ್ರವಾದಿಸಿದ್ದಾರೆ.
9 ಆದರೆ ನಾವು ನೆಮ್ಮದಿಯಿಂದ ಇರುವೆವು ಎಂದು ಪ್ರವಾದಿಸುವ ಪ್ರವಾದಿಯು ನಿಜವಾಗಿಯೂ ಯೆಹೋವನಿಂದ ಕಳುಹಿಸಲ್ಪಟ್ಟಿರುವನೇ ಎಂಬುದನ್ನು ನಾವು ಪರೀಕ್ಷಿಸಬೇಕು. ಆ ಪ್ರವಾದಿಯ ಸಂದೇಶವು ಸತ್ಯವಾಗಿ ಪರಿಣಮಿಸಿದರೆ ಅವನು ನಿಜವಾಗಿ ಯೆಹೋವನಿಂದ ಕಳುಹಿಸಲ್ಪಟ್ಟವನೆಂದು ಜನರು ತಿಳಿದುಕೊಳ್ಳಬಹುದು.”
10 ಯೆರೆಮೀಯನು ತನ್ನ ಹೆಗಲಿನ ಮೇಲೆ ನೊಗವನ್ನು ಹೊತ್ತುಕೊಂಡಿದ್ದನು. ಪ್ರವಾದಿಯಾದ ಹನನ್ಯನು ಯೆರೆಮೀಯನ ಹೆಗಲಿನಿಂದ ಆ ನೊಗವನ್ನು ತೆಗೆದುಕೊಂಡು ಆ ನೊಗವನ್ನು ಮುರಿದುಹಾಕಿದನು.
11 ಆಮೇಲೆ ಹನನ್ಯನು ಗಟ್ಟಿಯಾಗಿ ಎಲ್ಲರೂ ಕೇಳುವಂತೆ ಮಾತನಾಡಿದನು. “ಯೆಹೋವನು ಹೇಳುತ್ತಾನೆ: ‘ಇದೇ ರೀತಿಯಲ್ಲಿ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಹೇರಿದ ನೊಗವನ್ನು ನಾನು ಮುರಿದುಹಾಕುವೆನು. ಅವನು ಆ ನೊಗವನ್ನು ಜಗತ್ತಿನ ಸಮಸ್ತ ಜನಾಂಗಗಳ ಮೇಲೆ ಹೇರಿದ್ದಾನೆ. ಆದರೆ ನಾನು ಆ ನೊಗವನ್ನು ಎರಡು ವರ್ಷದೊಳಗಾಗಿ ಮುರಿದುಹಾಕುವೆನು.’ ”
ಹನನ್ಯನು ಹಾಗೆ ಹೇಳಿದ ಮೇಲೆ ಯೆರೆಮೀಯನು ಪವಿತ್ರಾಲಯವನ್ನು ಬಿಟ್ಟನು.
12 ಆಗ ಯೆರೆಮೀಯನಿಗೆ ಯೆಹೋವನ ಸಂದೇಶ ಬಂದಿತು. ಹನನ್ಯನು ಯೆರೆಮೀಯನ ಕತ್ತಿನಿಂದ ನೊಗವನ್ನು ತೆಗೆದುಕೊಂಡು ಮುರಿದುಹಾಕಿದ ಮೇಲೆ ಈ ಸಂದೇಶ ಬಂದಿತು.
13 ಯೆಹೋವನು ಯೆರೆಮೀಯನಿಗೆ ಹೀಗೆಂದನು: “ಹೋಗಿ ಹನನ್ಯನಿಗೆ ಹೀಗೆ ಹೇಳು: ‘ಯೆಹೋವನು ಹೀಗೆನ್ನುತ್ತಾನೆ. ನೀನು ಮರದ ನೊಗವನ್ನು ಮುರಿದೆ, ಆದರೆ ನಾನು ಮರದ ನೊಗಕ್ಕೆ ಬದಲಾಗಿ ಕಬ್ಬಿಣದ ನೊಗವನ್ನು ಮಾಡುವೆನು.
14 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೇಳುವುದೇನೆಂದರೆ, ನಾನು ಕಬ್ಬಿಣದ ನೊಗವನ್ನು ಈ ಎಲ್ಲಾ ಜನಾಂಗಗಳ ಹೆಗಲಿನ ಮೇಲೆ ಹೊರಿಸುವೆನು. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನ ಸೇವೆಯನ್ನು ಮಾಡುವಂತೆ ಮಾಡುತ್ತೇನೆ. ಅವರು ಅವನಿಗೆ ಗುಲಾಮರಾಗಿರುವರು. ನಾನು ನೆಬೂಕದ್ನೆಚ್ಚರನಿಗೆ ಕಾಡುಪ್ರಾಣಿಗಳ ಮೇಲೂ ಅಧಿಕಾರವನ್ನು ದಯಪಾಲಿಸುವೆನು.’ ”
15 ತರುವಾಯ ಪ್ರವಾದಿಯಾದ ಯೆರೆಮೀಯನು ಪ್ರವಾದಿಯಾದ ಹನನ್ಯನಿಗೆ ಹೀಗೆ ಹೇಳಿದನು: “ಹನನ್ಯನೇ, ಕೇಳು. ಯೆಹೋವನು ನಿನ್ನನ್ನು ಕಳುಹಿಸಲಿಲ್ಲ. ಆದರೆ ಯೆಹೂದದ ಜನರಿಗೆ ಸುಳ್ಳನ್ನು ನಂಬುವಂತೆ ನೀನು ಮಾಡಿರುವೆ.
16 ಅದಕ್ಕಾಗಿ ಯೆಹೋವನು ಹೀಗೆ ಹೇಳುತ್ತಾನೆ: ‘ಹನನ್ಯನೇ, ನಾನು ನಿನ್ನನ್ನು ಶೀಘ್ರದಲ್ಲಿ ಈ ಜಗತ್ತಿನಿಂದ ತೆಗೆದುಬಿಡುತ್ತೇನೆ. ನೀನು ಈ ವರ್ಷ ಮರಣಹೊಂದುವೆ. ಏಕೆಂದರೆ ನೀನು ಜನರನ್ನು ಯೆಹೋವನ ವಿರುದ್ಧ ತಿರುಗುವಂತೆ ಮಾಡಿದೆ.’ ”
17 ಹನನ್ಯನು ಅದೇ ವರ್ಷದ ಏಳನೆಯ ತಿಂಗಳಲ್ಲಿ ಮರಣಹೊಂದಿದನು.