15
1 ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ಯೆಹೂದದ ಜನರಿಗಾಗಿ ಪ್ರಾರ್ಥಿಸಿ, ಬೇಡಿಕೊಳ್ಳಲು ಮೋಶೆಯೂ ಸಮುವೇಲನೂ ಇದ್ದಿದ್ದರೂ ನಾನು ಈ ಜನರ ಬಗ್ಗೆ ಮರುಕಪಡುತ್ತಿರಲಿಲ್ಲ. ಯೆಹೂದದ ಜನರನ್ನು ನನ್ನಿಂದ ದೂರ ಕಳುಹಿಸು. ಅವರಿಗೆ ಹೋಗಲು ಹೇಳು.
2 ‘ನಾವು ಎಲ್ಲಿಗೆ ಹೋಗಬೇಕು’ ಎಂದು ಅವರು ಕೇಳಬಹುದು. ಯೆಹೋವನು ಹೀಗೆ ಹೇಳಿದ್ದಾನೆ ಎಂದು ನೀನು ಅವರಿಗೆ ಹೇಳು.
“ ‘ಕೆಲವು ಜನರು ಮರಣಹೊಂದಬೇಕೆಂದು ನಾನು ಗೊತ್ತುಮಾಡಿದ್ದೇನೆ.
ಅವರು ಮರಣಹೊಂದುತ್ತಾರೆ.
ಕೆಲವು ಜನರು ಖಡ್ಗಗಳಿಂದ ಕೊಲ್ಲಲ್ಪಡಬೇಕೆಂದು ನಾನು ಗೊತ್ತುಮಾಡಿದ್ದೇನೆ.
ಅವರು ಖಡ್ಗಗಳಿಗೆ ಬಲಿಯಾಗುತ್ತಾರೆ.
ಕೆಲವು ಜನರು ಹೊಟ್ಟೆಗೆ ಅನ್ನವಿಲ್ಲದೆ ಸಾಯಬೇಕು ಎಂದು ನಾನು ಗೊತ್ತುಮಾಡಿದ್ದೇನೆ.
ಅವರು ಹಸಿವಿನಿಂದ ಸಾಯುತ್ತಾರೆ.
ಕೆಲವು ಜನರನ್ನು ಶತ್ರುಗಳು ಸೆರೆಹಿಡಿದು ಪರದೇಶಕ್ಕೆ ತೆಗೆದುಕೊಂಡು ಹೋಗಲಿ ಎಂದು ಗೊತ್ತುಮಾಡಿದ್ದೇನೆ.
ಅವರು ಪರದೇಶದಲ್ಲಿ ಸೆರೆಯಾಳುಗಳಾಗಿ ಇರುವರು.
3 ನಾನು ಅವರ ವಿರುದ್ಧ ನಾಲ್ಕು ರೀತಿಯ ವಿನಾಶಕರನ್ನು ಕಳುಹಿಸುತ್ತೇನೆ.’
ಇದು ಯೆಹೋವನ ನುಡಿ.
‘ಅವರನ್ನು ಕೊಲೆಮಾಡಲು ಖಡ್ಗಧಾರಿಗಳಾದ ಶತ್ರುಗಳನ್ನು ಕಳುಹಿಸುತ್ತೇನೆ.
ಅವರ ದೇಹಗಳನ್ನು ಎಳೆದುಕೊಂಡು ಹೋಗುವುದಕ್ಕಾಗಿ ನಾಯಿಗಳನ್ನು ಕಳುಹಿಸುತ್ತೇನೆ.
ಅವರ ದೇಹಗಳನ್ನು ತಿನ್ನಲು ಮತ್ತು ನಾಶಮಾಡಲು
ಗಾಳಿಯಲ್ಲಿ ಹಾರಾಡುವ ಪಕ್ಷಿಗಳನ್ನೂ ಕಾಡುಪ್ರಾಣಿಗಳನ್ನೂ ಕಳುಹಿಸುತ್ತೇನೆ.
4 ಯೆಹೂದದ ಜನರನ್ನು ಭೂಲೋಕದ ಎಲ್ಲಾ ಜನರಿಗೆ
ಒಂದು ಭಯಾನಕವಾದ ಉದಾಹರಣೆಯಾಗುವಂತೆ ಮಾಡುತ್ತೇನೆ.
ಮನಸ್ಸೆಯು ಜೆರುಸಲೇಮಿನಲ್ಲಿ ಮಾಡಿದ ಪಾಪಕೃತ್ಯಗಳ ಫಲವಾಗಿ
ನಾನು ಯೆಹೂದದಲ್ಲಿ ಹೀಗೆ ಮಾಡುತ್ತೇನೆ.
ಮನಸ್ಸೆಯು ರಾಜನಾದ ಹಿಜ್ಕೀಯನ ಮಗನಾಗಿದ್ದನು.
ಮನಸ್ಸೆಯು ಯೆಹೂದದ ರಾಜನಾಗಿದ್ದನು.’
5 “ಜೆರುಸಲೇಮ್ ನಗರವೇ, ನಿನಗಾಗಿ ಯಾರೂ ವ್ಯಥೆಪಡುವದಿಲ್ಲ.
ನಿನಗಾಗಿ ದುಃಖಪಡುವುದಿಲ್ಲ ಮತ್ತು ಆಳುವುದಿಲ್ಲ.
ಯಾರೂ ತಮ್ಮ ದಿನನಿತ್ಯದ ಕೆಲಸಕಾರ್ಯಗಳನ್ನು ಬಿಟ್ಟು ನಿನ್ನ ಯೋಗಕ್ಷೇಮವನ್ನು ವಿಚಾರಿಸಲು ಬರುವುದಿಲ್ಲ.
6 ಜೆರುಸಲೇಮೇ, ನೀನು ನನ್ನನ್ನು ತ್ಯಜಿಸಿದೆ”
ಇದು ಯೆಹೋವನ ನುಡಿ.
“ಮತ್ತೆಮತ್ತೆ ನೀನು ನನ್ನನ್ನು ತ್ಯಜಿಸಿದೆ.
ಆದ್ದರಿಂದ ನಾನು ನಿನ್ನನ್ನು ದಂಡಿಸುತ್ತೇನೆ ಮತ್ತು ನಾಶಮಾಡುತ್ತೇನೆ.
ನಿನಗೆ ಸಲ್ಲಬೇಕಾದ ಶಿಕ್ಷೆಯನ್ನು ಪುನಃ ತಡೆಹಿಡಿದು ನಾನು ದಣಿದಿದ್ದೇನೆ.
7 ಯೆಹೂದದ ಜನರನ್ನು ನಾನು ಕವೆಗೋಲಿನಿಂದ ವಿಂಗಡಿಸಿದ
ದೇಶದ ಎಲ್ಲಾ ನಗರಗಳ ದ್ವಾರದಲ್ಲಿ ಚದರಿಸುತ್ತೇನೆ.
ನನ್ನ ಜನರು ಬದಲಾಗಲಿಲ್ಲ.
ನಾನು ಅವರನ್ನು ನಾಶಮಾಡುತ್ತೇನೆ.
ನಾನು ಅವರ ಮಕ್ಕಳನ್ನು ಕಸಿದುಕೊಳ್ಳುತ್ತೇನೆ.
8 ಅನೇಕ ಹೆಂಗಸರು ತಮ್ಮ ಗಂಡಂದಿರನ್ನು ಕಳೆದುಕೊಳ್ಳುವರು.
ಸಮುದ್ರದಡದಲ್ಲಿದ್ದ ಮರಳು ಕಣಗಳಿಗಿಂತ ವಿಧವೆಯರ ಸಂಖ್ಯೆ ಹೆಚ್ಚಾಗುವುದು.
ಮಧ್ಯಾಹ್ನದಲ್ಲಿಯೇ ನಾನು ಬಾತುಕನನ್ನು ತರುವೆನು.
ಆ ಘಾತುಕನು ಯೆಹೂದದ ತಾಯಂದಿರ ಮೇಲೆರಗುವನು.
ನಾನು ಯೆಹೂದದ ಜನರಿಗೆ ನೋವನ್ನು ಮತ್ತು ಭಯವನ್ನು ತರುವೆನು;
ಅತೀ ಶೀಘ್ರದಲ್ಲಿಯೇ ಹೀಗಾಗುವಂತೆ ಮಾಡುವೆನು.
9 ಶತ್ರುಗಳು ಖಡ್ಗಧಾರಿಗಳಾಗಿ ಬಂದು ಜನರ ಮೇಲೆರಗಿ ಕೊಲೆಮಾಡುವರು.
ಯೆಹೂದದಲ್ಲಿ ಜೀವಂತ ಉಳಿದವರನ್ನು ಅವರು ವಧಿಸುವರು.
ಒಬ್ಬ ಸ್ತ್ರೀಗೆ ಏಳು ಜನ ಮಕ್ಕಳಿದ್ದರೂ ಅವರೆಲ್ಲ ಸತ್ತುಹೋಗುವರು.
ಅವಳು ಅತ್ತೂಅತ್ತೂ ಬಳಲಿ ಉಸಿರಾಡದಂತಾಗುವಳು.
ಅವಳು ಕಳವಳಪಡುವಳು ಮತ್ತು ಗಾಬರಿಗೊಳ್ಳುವಳು.
ಪ್ರಕಾಶಮಯವಾದ ದಿನವು ದುಃಖದ ನಿಮಿತ್ತ ಅವಳಿಗೆ ಕತ್ತಲಾಗುವುದು.”
ಯೆರೆಮೀಯನು ಪುನಃ ದೇವರಲ್ಲಿ ದೂರುತ್ತಾನೆ
10 ನನ್ನ ತಾಯೀ, ನೀನು ಜನ್ಮಕೊಟ್ಟಿದ್ದಕ್ಕಾಗಿ
ನನಗೆ ದುಃಖವಾಗುತ್ತದೆ.
ಯೆರೆಮೀಯನಾದ ನಾನು ಇಡೀ ದೇಶದ ಜನರ ವಿರುದ್ಧವಾಗಿ
ವಾದಿಸುತ್ತಾ ನಿಂದಿಸುತ್ತಾ ಇರುವೆ.
ನಾನು ಯಾರಿಗೂ ಸಾಲವನ್ನು ಕೊಟ್ಟಿಲ್ಲ; ಸಾಲವನ್ನು ತೆಗೆದುಕೊಂಡಿಲ್ಲ.
ಆದರೆ ಪ್ರತಿಯೊಬ್ಬರು ನನ್ನನ್ನು ಶಪಿಸುತ್ತಾರೆ.
11 ದೇವರೇ, ನಿಜವಾಗಿಯೂ ನಾನು ನಿನ್ನ ಸೇವೆಯನ್ನು ಚೆನ್ನಾಗಿ ಮಾಡಿದ್ದೇನೆ.
ಕಷ್ಟದ ಕಾಲದಲ್ಲಿ ನನ್ನ ವೈರಿಗಳ ಬಗ್ಗೆ ನಾನು ನಿನ್ನಲ್ಲಿ ಪ್ರಾರ್ಥಿಸಿದ್ದೇನೆ.
ಯೆರೆಮೀಯನಿಗೆ ದೇವರ ಉತ್ತರ
12 “ಯೆರೆಮೀಯನೇ, ಕಬ್ಬಿಣದ ತುಂಡನ್ನು ಪುಡಿ ಮಾಡಲು
ಯಾರಿಗೂ ಸಾಧ್ಯವಿಲ್ಲವೆಂಬುದು ನಿನಗೆ ಗೊತ್ತು.
ಉತ್ತರದಿಂದ ಬರುವವನು ಕಬ್ಬಿಣದಂತಿದ್ದಾನೆ.
13 ಯೆಹೂದದ ಜನರಲ್ಲಿ ಅನೇಕ ಭಂಡಾರಗಳಿವೆ.
ಆ ಭಂಡಾರಗಳನ್ನು ನಾನು ಬೇರೆಯವರಿಗೆ ಒಪ್ಪಿಸುತ್ತೇನೆ.
ಬೇರೆಯವರು ಆ ಭಂಡಾರಗಳನ್ನು ಹಣ ಕೊಟ್ಟು ತೆಗೆದುಕೊಳ್ಳಬೇಕಾಗಿಲ್ಲ. ನಾನು ಅವರಿಗೆ ಅವುಗಳನ್ನು ಉಚಿತವಾಗಿ ಕೊಟ್ಟುಬಿಡುತ್ತೇನೆ.
ಏಕೆಂದರೆ ಯೆಹೂದವು ಅನೇಕ ಪಾಪಗಳನ್ನು ಮಾಡಿದೆ.
ದೇಶದ ಪ್ರತಿಯೊಂದು ಭಾಗದಲ್ಲಿಯೂ ಯೆಹೂದ ಪಾಪಮಾಡಿದೆ.
14 ಯೆಹೂದದ ಜನರೇ, ನಾನು ನಿಮ್ಮ ಮೇಲೆ ಶತ್ರುಗಳನ್ನು ಬರಮಾಡುವೆನು.
ಅವರು ನೀವೆಂದೂ ತಿಳಿಯದ ಪ್ರದೇಶದಿಂದ ಬಂದು ನಿಮ್ಮನ್ನು ಅಲ್ಲಿಗೆ ಸಾಗಿಸುವರು.
ನನಗೆ ಅತಿಕೋಪ ಬಂದಿದೆ.
ನನ್ನ ಕೋಪವು ಜ್ವಾಲೆಯಂತಿದೆ.
ಆ ಜ್ವಾಲೆಯಿಂದ ನೀವು ಸುಟ್ಟುಹೋಗುವಿರಿ.”
15 ಯೆಹೋವನೇ, ನನ್ನ ವಿಷಯ ನಿನಗೆ ಗೊತ್ತು.
ನನ್ನನ್ನು ಜ್ಞಾಪಕದಲ್ಲಿಟ್ಟುಕೊಂಡು ರಕ್ಷಿಸು.
ಜನರು ನನ್ನನ್ನು ತೊಂದರೆಗೀಡು ಮಾಡುತ್ತಿದ್ದಾರೆ.
ಅವರಿಗೆ ತಕ್ಕ ಶಿಕ್ಷೆಯನ್ನು ಕೊಡು.
ನೀನು ಅವರೊಂದಿಗೆ ಬಹಳ ತಾಳ್ಮೆಯಿಂದ ವರ್ತಿಸುತ್ತಿರುವೆ.
ಅವರೊಂದಿಗೆ ತಾಳ್ಮೆಯಿಂದ ಇದ್ದು ನನ್ನನ್ನು ಹಾಳುಮಾಡಬೇಡ.
ನನ್ನ ಬಗ್ಗೆ ವಿಚಾರ ಮಾಡು.
ಯೆಹೋವನೇ, ನಿನಗಾಗಿ ನಾನು ಎಷ್ಟು ಕಷ್ಟಪಡುತ್ತಿದ್ದೇನೆ ಎಂಬುದನ್ನು ಯೋಚಿಸು.
16 ನಿನ್ನ ಸಂದೇಶ ನನಗೆ ಬಂದಿತು. ನಾನು ನಿನ್ನ ಮಾತುಗಳನ್ನು ಆಹಾರವನ್ನಾಗಿ ಮಾಡಿಕೊಂಡೆ.
ನಿನ್ನ ಸಂದೇಶದಿಂದ ನನಗೆ ತುಂಬಾ ಸಂತೋಷವಾಯಿತು.
ನಿನ್ನನ್ನು ಹೆಸರಿಡಿದು ಕರೆಯುವುದರಿಂದ ನನಗೆ ಹೆಚ್ಚಿನ ಸಂತೋಷವಾಗಿತ್ತು. ನಿನ್ನ ಹೆಸರು ಸರ್ವಶಕ್ತನಾದ ಯೆಹೋವನು.
17 ತಮಾಷೆ ಮಾಡಿಕೊಂಡು ನಗುತ್ತಲಿದ್ದ
ಗುಂಪಿನಲ್ಲಿ ನಾನೆಂದೂ ಸೇರಲಿಲ್ಲ.
ನನ್ನ ಮೇಲೆ ಆದ ನಿನ್ನ ಪ್ರಭಾವದಿಂದ ನಾನೊಬ್ಬನೇ ಕುಳಿತುಕೊಂಡಿರುತ್ತಿದ್ದೆ.
ನನ್ನ ಸುತ್ತಮುತ್ತಲಿನ ದುಷ್ಟತನದ ಮೇಲೆ ನನ್ನಲ್ಲಿ ರೋಷವನ್ನು ತುಂಬಿದೆ.
18 ಹೀಗಿದ್ದರೂ ನನಗೇಕೆ ವ್ಯಥೆ ಉಂಟಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ.
ನನ್ನ ಗಾಯ ಏಕೆ ಗುಣವಾಗುತ್ತಿಲ್ಲ? ಏಕೆ ವಾಸಿಯಾಗುತ್ತಿಲ್ಲ ಎಂಬುದು ನನಗೆ ತಿಳಿಯದು.
ಯೆಹೋವನೇ, ನಿನ್ನಲ್ಲಿ ಬದಲಾವಣೆಯಾಗಿದೆ ಎಂದು ನನಗೆ ಅನಿಸುತ್ತಿದೆ.
ನೀನು ಪ್ರವಾಹ ನಿಂತುಹೋದ ನೀರಿನ ಬುಗ್ಗೆಯಂತಿರುವೆ.
19 ಆಗ ಯೆಹೋವನು ಹೇಳಿದನು: “ಯೆರೆಮೀಯನೇ, ನೀನು ಬದಲಾವಣೆ ಹೊಂದಿ ನನ್ನಲ್ಲಿಗೆ ಬಂದರೆ
ನಾನು ನಿನ್ನನ್ನು ದಂಡಿಸುವುದಿಲ್ಲ.
ನೀನು ಬದಲಾವಣೆ ಹೊಂದಿ ನನ್ನಲ್ಲಿಗೆ ಬಂದರೆ
ನೀನು ನನ್ನ ಸೇವೆ ಮಾಡಬಹುದು.
ಹುರುಳಿಲ್ಲದ ಮಾತುಗಳನ್ನು ಬಿಟ್ಟು ಮುಖ್ಯವಾದ ವಿಷಯಗಳನ್ನು ಕುರಿತು ಮಾತನಾಡುವದಾದರೆ
ನೀನು ನನ್ನ ಪರವಾಗಿ ಮಾತನಾಡಬಹುದು.
ಯೆರೆಮೀಯನೇ, ಯೆಹೂದದ ಜನರು
ಬದಲಾವಣೆ ಹೊಂದಿ ನಿನ್ನಲ್ಲಿಗೆ ಬರಬೇಕು.
ಆದರೆ ನೀನು ಬದಲಾವಣೆ ಹೊಂದಿ ಅವರಂತೆ ಆಗಬಾರದು.
20 ನಾನು ನಿನ್ನನ್ನು ಬಲಶಾಲಿಯನ್ನಾಗಿ ಮಾಡುತ್ತೇನೆ.
ನೀನು ತಾಮ್ರದ ಗೋಡೆಯಂತೆ ಗಟ್ಟಿಯಾಗಿರುವೆ
ಎಂದು ಆ ಜನರು ತಿಳಿದುಕೊಳ್ಳುವರು.
ಯೆಹೂದದ ಜನರು ನಿನ್ನ ವಿರುದ್ಧ ಹೋರಾಡುವರು.
ಆದರೆ ಅವರು ನಿನ್ನನ್ನು ಸೋಲಿಸಲಾರರು.
ಏಕೆಂದರೆ ನಾನೇ ನಿನ್ನ ಜೊತೆಯಲ್ಲಿ ಇದ್ದೇನೆ.
ನಾನು ನಿನಗೆ ಸಹಾಯಮಾಡುತ್ತೇನೆ ಮತ್ತು ನಾನು ನಿನ್ನನ್ನು ರಕ್ಷಿಸುತ್ತೇನೆ”
ಇದು ಯೆಹೋವನಿಂದ ಬಂದ ನುಡಿ.
21 “ನಾನು ನಿನ್ನನ್ನು ಆ ದುಷ್ಟ ಜನರಿಂದ ರಕ್ಷಿಸುತ್ತೇನೆ.
ಆ ಜನರು ನಿನ್ನನ್ನು ಬೆದರಿಸುತ್ತಾರೆ. ಆದರೆ ನಾನು ನಿನ್ನನ್ನು ಆ ಜನರಿಂದ ರಕ್ಷಿಸುತ್ತೇನೆ.”