37
ಕನಸುಗಾರ ಯೋಸೇಫ
1 ಯಾಕೋಬನು ಕಾನಾನ್ ದೇಶದಲ್ಲಿ ನೆಲೆಸಿದನು. ಅವನ ತಂದೆ ಆ ದೇಶದಲ್ಲೇ ವಾಸವಾಗಿದ್ದನು.
2 ಯಾಕೋಬನ ಕುಟುಂಬದ ಚರಿತ್ರೆಯಿದು:
ಯೋಸೇಫನು ಹದಿನೇಳು ವರ್ಷದ ಯೌವನಸ್ಥನಾಗಿದ್ದನು. ಆಡುಕುರಿಗಳನ್ನು ಸಾಕುವುದು ಅವನ ಕಸುಬಾಗಿತ್ತು. ತನ್ನ ಅಣ್ಣಂದಿರೊಡನೆ ಅಂದರೆ ಬಿಲ್ಹಾ ಮತ್ತು ಜಿಲ್ಪಾ ಎಂಬ ತನ್ನ ಮಲತಾಯಿಗಳ ಮಕ್ಕಳೊಡನೆ ಯೋಸೇಫನು ಆಡುಕುರಿಗಳನ್ನು ಮೇಯಿಸುತ್ತಿದ್ದನು. ಅವರೇನಾದರೂ ಕೆಟ್ಟದ್ದನ್ನು ಮಾಡಿದರೆ ಯೋಸೇಫನು ತಂದೆಗೆ ತಿಳಿಸುತ್ತಿದ್ದನು.
3 ಇಸ್ರೇಲನು ತುಂಬ ಮುಪ್ಪಿನವನಾಗಿದ್ದಾಗ ಯೋಸೇಫನು ಹುಟ್ಟಿದ್ದರಿಂದ ಇಸ್ರೇಲನು ತನ್ನ ಬೇರೆ ಗಂಡುಮಕ್ಕಳಿಗಿಂತಲೂ ಹೆಚ್ಚಾಗಿ ಯೋಸೇಫನನ್ನು ಪ್ರೀತಿಸಿದನು. ಯಾಕೋಬನು ತನ್ನ ಮಗನಿಗೆ ಸುಂದರವಾದ ನಿಲುವಂಗಿಯನ್ನು ಮಾಡಿಸಿ ಕೊಟ್ಟಿದ್ದನು.
4 ತಮ್ಮ ತಂದೆಗೆ ಯೋಸೇಫನ ಮೇಲೆ ಹೆಚ್ಚು ಪ್ರೀತಿಯಿರುವುದನ್ನು ಗಮನಿಸಿದ ಯೋಸೇಫನ ಅಣ್ಣಂದಿರು ಯೋಸೇಫನನ್ನು ದ್ವೇಷಿಸತೊಡಗಿ ಅವನೊಡನೆ ಸ್ನೇಹಭಾವದಿಂದ ಮಾತಾಡುತ್ತಿರಲಿಲ್ಲ.
5 ಒಂದು ದಿನ ಯೋಸೇಫನು ವಿಶೇಷವಾದ ಕನಸನ್ನು ಕಂಡನು. ಯೋಸೇಫನು ಈ ಕನಸನ್ನು ತನ್ನ ಅಣ್ಣಂದಿರಿಗೆ ತಿಳಿಸಿದಾಗ ಅವರು ಅವನನ್ನು ಮತ್ತಷ್ಟು ದ್ವೇಷಿಸತೊಡಗಿದರು.
6 ಯೋಸೇಫನು ಅವರಿಗೆ, “ನನಗೆ ಒಂದು ಕನಸಾಯಿತು.
7 ನಾವೆಲ್ಲರು ಹೊಲದಲ್ಲಿ ಗೋಧಿಯ ಸಿವುಡುಗಳನ್ನು ಕಟ್ಟುತ್ತಿದ್ದೆವು. ಆಗ ನನ್ನ ಸಿವುಡು ಎದ್ದುನಿಂತಿತು; ನನ್ನ ಸಿವುಡಿನ ಸುತ್ತಲೂ ನಿಮ್ಮ ಸಿವುಡುಗಳೆಲ್ಲಾ ಎದ್ದುನಿಂತುಕೊಂಡು ನನ್ನ ಸಿವುಡಿಗೆ ಅಡ್ಡಬಿದ್ದವು” ಎಂದು ಹೇಳಿದನು.
8 ಅವನ ಅಣ್ಣಂದಿರು, “ನೀನು ರಾಜನಾಗಿ ನಮ್ಮನ್ನು ಆಳುವೆ ಎಂಬುದು ಇದರ ಅರ್ಥವೆಂದು ನಿನ್ನ ಆಲೋಚನೆಯೋ?” ಎಂದು ಪ್ರಶ್ನಿಸಿ ಆ ಕನಸಿನ ನಿಮಿತ್ತ ಅವನನ್ನು ಮತ್ತಷ್ಟು ದ್ವೇಷಿಸತೊಡಗಿದರು.
9 ಆಮೇಲೆ ಯೋಸೇಫನಿಗೆ ಮತ್ತೊಂದು ಕನಸಾಯಿತು. ಯೋಸೇಫನು ಈ ಕನಸಿನ ಬಗ್ಗೆಯೂ ತನ್ನ ಅಣ್ಣಂದಿರಿಗೆ ತಿಳಿಸಿದನು. ಯೋಸೇಫನು ಅವರಿಗೆ, “ನನಗೆ ಮತ್ತೊಂದು ಕನಸಾಯಿತು. ಸೂರ್ಯ, ಚಂದ್ರ ಮತ್ತು ಹನ್ನೊಂದು ನಕ್ಷತ್ರಗಳು ನನಗೆ ಅಡ್ಡಬೀಳುವುದನ್ನು ಕಂಡೆನು” ಎಂದು ಹೇಳಿದನು.
10 ಯೋಸೇಫನು ತನ್ನ ತಂದೆಗೂ ಸಹ ಈ ಕನಸಿನ ಬಗ್ಗೆ ತಿಳಿಸಿದನು. ಆದರೆ ಅವನ ತಂದೆ ಅವನನ್ನು ಗದರಿಸಿ, “ಇದೆಂಥಾ ಕನಸು? ನಾನೂ ನಿನ್ನ ತಾಯಿಯೂ ಮತ್ತು ನಿನ್ನ ಸಹೋದರರೂ ನಿನಗೆ ಅಡ್ಡಬೀಳುತ್ತೇವೆಂದು ನಂಬುತ್ತೀಯೋ?” ಎಂದು ಕೇಳಿದನು.
11 ಯೋಸೇಫನ ಅಣ್ಣಂದಿರಿಗೆ ಅವನ ಮೇಲೆ ಹೊಟ್ಟೆಕಿಚ್ಚು ಹೆಚ್ಚಾಯಿತು. ಆದರೆ ಯೋಸೇಫನ ತಂದೆಯು ಆ ಕನಸುಗಳ ಬಗ್ಗೆ ಆಶ್ಚರ್ಯಚಕಿತನಾಗಿ ಆಲೋಚಿಸತೊಡಗಿದನು.
12 ಒಂದು ದಿನ ಯೋಸೇಫನ ಅಣ್ಣಂದಿರು ತಮ್ಮ ತಂದೆಯ ಆಡುಕುರಿಗಳನ್ನು ಕಾಯಲು ಶೆಕೆಮಿಗೆ ಹೋದರು.
13 ಇಸ್ರೇಲನು ಯೋಸೇಫನಿಗೆ, “ಶೆಕೆಮಿಗೆ ಹೋಗು. ನಿನ್ನ ಅಣ್ಣಂದಿರು ಅಲ್ಲಿ ನನ್ನ ಆಡುಕುರಿಗಳನ್ನು ಮೇಯಿಸುತ್ತಿದ್ದಾರೆ” ಎಂದು ಹೇಳಿದನು.
ಯೋಸೇಫನು, “ಸರಿ, ಹೋಗುವೆನು” ಎಂದು ಉತ್ತರಿಸಿದನು.
14 ಇಸ್ರೇಲನು, “ನಿನ್ನ ಅಣ್ಣಂದಿರ ಮತ್ತು ಆಡುಕುರಿಗಳ ಕ್ಷೇಮವನ್ನು ವಿಚಾರಿಸಿಕೊಂಡು ಬಂದು ನನಗೆ ತಿಳಿಸು” ಎಂದು ಹೇಳಿ ಅವನನ್ನು ಹೆಬ್ರೋನಿನ ಕಣಿವೆಯಿಂದ ಶೆಕೆಮಿಗೆ ಕಳುಹಿಸಿಕೊಟ್ಟನು.
15 ಶೆಕೆಮಿನಲ್ಲಿ ದಾರಿತಪ್ಪಿ ಯೋಸೇಫನು ಹೊಲಗಳಲ್ಲಿ ಅಲೆದಾಡುತ್ತಿರಲು ಅವನನ್ನು ಕಂಡ ಒಬ್ಬನು, “ಏನು ಹುಡುಕುತ್ತಿರುವೆ?” ಎಂದು ಕೇಳಿದನು.
16 ಯೋಸೇಫನು, “ನನ್ನ ಅಣ್ಣಂದಿರನ್ನು ಹುಡುಕುತ್ತಿದ್ದೇನೆ. ಅವರು ತಮ್ಮ ಆಡುಕುರಿಗಳನ್ನು ಎಲ್ಲಿ ಮೇಯಿಸುತ್ತಿದ್ದಾರೆ?” ಎಂದು ಕೇಳಿದನು.
17 ಅದಕ್ಕೆ ಅವನು, “ಅವರು ಇಲ್ಲಿಂದ ಹೊರಟುಹೋದರು. ದೋತಾನಿಗೆ ಹೋಗೋಣ ಎಂದು ಅವರು ಮಾತಾಡಿಕೊಳ್ಳುವುದನ್ನು ನಾನು ಕೇಳಿದೆ” ಎಂದು ಹೇಳಿದನು. ಆದ್ದರಿಂದ ಯೋಸೇಫನು ಅವರನ್ನು ಹುಡುಕುತ್ತಾ ಹೋಗಿ ದೋತಾನಿನಲ್ಲಿ ಅವರನ್ನು ಕಂಡನು.
ಯೋಸೇಫನನ್ನು ಗುಲಾಮತನಕ್ಕೆ ಮಾರಿದ್ದು
18 ಯೋಸೇಫನನ್ನು ಬಹುದೂರದಿಂದಲೇ ಕಂಡ ಅವನ ಅಣ್ಣಂದಿರು ಅವನನ್ನು ಕೊಲ್ಲಲು ಒಂದು ಉಪಾಯ ಮಾಡಿದರು.
19 ಅವರು ಒಬ್ಬರಿಗೊಬ್ಬರು, “ಅಗೋ, ಅಲ್ಲಿ ಬರುತ್ತಿದ್ದಾನೆ ಕನಸುಗಾರನಾದ ಯೋಸೇಫ.
20 ಅವನನ್ನು ಕೊಲ್ಲಲು ಇದೇ ತಕ್ಕ ಸಮಯ. ಅವನನ್ನು ಕೊಂದು ನೀರಿಲ್ಲದ ಬಾವಿಯೊಳಗೆ ದಬ್ಬಿ, ಕ್ರೂರ ಪ್ರಾಣಿಯೊಂದು ಅವನನ್ನು ತಿಂದುಬಿಟ್ಟಿತೆಂದು ನಮ್ಮ ತಂದೆಗೆ ಹೇಳೋಣ. ಆಗ ಅವನ ಕನಸುಗಳೆಲ್ಲ ಹೇಗೆ ನಿಜವಾಗುತ್ತವೊ ನೋಡೋಣ” ಎಂದು ಮಾತಾಡಿಕೊಂಡರು.
21 ಆದರೆ ರೂಬೇನನು ಅವರಿಗೆ, “ಅವನನ್ನು ಕೊಲ್ಲಬೇಡಿ;
22 ಅರಣ್ಯದಲ್ಲಿರುವ ಬರಿದಾದ ಬಾವಿಗೆ ಅವನನ್ನು ನೂಕಿಬಿಡಿ; ಆದರೆ ಅವನಿಗೆ ನೋವು ಮಾಡಬೇಡಿ” ಎಂದು ಹೇಳಿದನು. ತರುವಾಯ ಯೋಸೇಫನನ್ನು ಬಾವಿಯಿಂದ ಮೇಲೆತ್ತಿ ತಂದೆಗೆ ಅವನನ್ನು ಒಪ್ಪಿಸಬೇಕೆಂಬುದೇ ರೂಬೇನನ ಅಪೇಕ್ಷೆಯಾಗಿತ್ತು.
23 ಯೋಸೇಫನು ಬಂದಾಗ ಅವನ ಅಣ್ಣಂದಿರು ಅವನನ್ನು ಹಿಡಿದು ಅವನ ನಿಲುವಂಗಿಯನ್ನು ಹರಿದುಹಾಕಿ
24 ನೀರಿಲ್ಲದ ಒಂದು ಬಾವಿಯೊಳಗೆ ತಳ್ಳಿದರು.
25 ಯೋಸೇಫನು ಬಾವಿಯೊಳಗಿದ್ದಾಗ, ಅವನ ಅಣ್ಣಂದಿರು ಊಟಕ್ಕೆ ಕುಳಿತುಕೊಂಡರು. ಅವರು ಕಣ್ಣೆತ್ತಿ ನೋಡಿದಾಗ ಗಿಲ್ಯಾದಿನಿಂದ ಈಜಿಪ್ಟಿಗೆ ಹೋಗುತ್ತಿದ್ದ ವ್ಯಾಪಾರಿಗಳನ್ನು ಕಂಡರು. ಅವರ ಒಂಟೆಗಳು ಅನೇಕ ಬಗೆಯ ಸಾಂಬಾರ ಪದಾರ್ಥಗಳನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ಹೊತ್ತುಕೊಂಡು ಹೋಗುತ್ತಿದ್ದವು.
26 ಆದ್ದರಿಂದ ಯೆಹೂದನು ತನ್ನ ಸಹೋದರರಿಗೆ, “ನಾವು ನಮ್ಮ ತಮ್ಮನನ್ನು ಕೊಂದು ಅವನ ಮರಣವನ್ನು ಮರೆಮಾಡಿದರೆ ನಮಗಾಗುವ ಲಾಭವೇನು?
27 ಈ ವ್ಯಾಪಾರಿಗಳಿಗೆ ನಾವು ಅವನನ್ನು ಮಾರಿದರೆ ನಮಗೆ ಹೆಚ್ಚು ಲಾಭವಾಗುವುದು; ಆಮೇಲೆ ನಮ್ಮ ತಮ್ಮನನ್ನು ಕೊಂದ ಅಪರಾಧವೂ ನಮ್ಮ ಮೇಲಿರುವುದಿಲ್ಲ” ಎಂದು ಹೇಳಿದನು. ಅದಕ್ಕೆ ಉಳಿದ ಸಹೋದರರೆಲ್ಲ ಒಪ್ಪಿಕೊಂಡರು.
28 ಮಿದ್ಯಾನಿನ ವ್ಯಾಪಾರಿಗಳು ಸಮೀಪಿಸಿದಾಗ, ಅಣ್ಣಂದಿರು ಯೋಸೇಫನನ್ನು ಬಾವಿಯೊಳಗಿಂದ ಹೊರತೆಗೆದು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು. ವ್ಯಾಪಾರಿಗಳು ಯೋಸೇಫನನ್ನು ಈಜಿಪ್ಟಿಗೆ ಕೊಂಡೊಯ್ದರು.
29 ಆ ಸಮಯದಲ್ಲಿ ರೂಬೇನನು ತನ್ನ ಸಹೋದರರೊಡನೆ ಇರಲಿಲ್ಲ. ಅವರು ಯೋಸೇಫನನ್ನು ಮಾರಿದ್ದು ಅವನಿಗೆ ಗೊತ್ತಿರಲಿಲ್ಲ. ರೂಬೇನನು ಬಾವಿಗೆ ಹಿಂತಿರುಗಿ ಬಂದಾಗ, ಯೋಸೇಫನನ್ನು ಅಲ್ಲಿ ಕಾಣದೆ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನು.
30 ರೂಬೇನನು ತನ್ನ ಸಹೋದರರ ಬಳಿಗೆ ಹೋಗಿ, “ಹುಡುಗನು ಬಾವಿಯೊಳಗೆ ಇಲ್ಲ. ಈಗ ನಾನೇನು ಮಾಡಲಿ?” ಎಂದು ಕೇಳಿದನು.
31 ಬಳಿಕ ಅವರು ಒಂದು ಆಡನ್ನು ಕತ್ತರಿಸಿ ಆಡಿನ ರಕ್ತವನ್ನು ಯೋಸೇಫನ ಸುಂದರವಾದ ನಿಲುವಂಗಿಯ ಮೇಲೆ ಹಾಕಿದರು.
32 ಬಳಿಕ ಆ ನಿಲುವಂಗಿಯನ್ನು ತಮ್ಮ ತಂದೆಯ ಬಳಿಗೆ ತೆಗೆದುಕೊಂಡು ಹೋಗಿ, “ನಾವು ಈ ನಿಲುವಂಗಿಯನ್ನು ಕಂಡೆವು. ಇದು ಯೋಸೇಫನ ನಿಲುವಂಗಿಯೋ?” ಎಂದು ಕೇಳಿದರು.
33 ತಂದೆಯು ಆ ನಿಲುವಂಗಿಯನ್ನು ನೋಡಿ ಅದನ್ನು ಗುರುತಿಸಿ, “ಹೌದು, ಇದು ಯೋಸೇಫನದೇ. ಯಾವುದೋ ಕ್ರೂರ ಪ್ರಾಣಿಯ ಬಾಯಿಗೆ ತುತ್ತಾದನು” ಎಂದು ಹೇಳಿ
34 ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಸುತ್ತಿಕೊಂಡು ಬಹುದಿನಗಳವರೆಗೆ ದುಃಖಪಟ್ಟನು.
35 ಯಾಕೋಬನ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಎಷ್ಟೇ ಸಂತೈಸಿದರೂ ಯಾಕೋಬನಿಗೆ ಆದರಣೆಯಾಗಲಿಲ್ಲ. ಯಾಕೋಬನು ಅವರಿಗೆ, “ನಾನು ಸಾಯುವ ತನಕ ನನ್ನ ಮಗನಿಗಾಗಿ ದುಃಖಪಡುವೆ” ಎಂದು ಹೇಳಿ ದುಃಖಿಸುತ್ತಲೇ ಇದ್ದನು.
36 ಮಿದ್ಯಾನಿನ ವ್ಯಾಪಾರಿಗಳು ಯೋಸೇಫನನ್ನು ಈಜಿಪ್ಟಿನಲ್ಲಿ ಮಾರಿದರು. ಅವರು ಅವನನ್ನು ಫರೋಹನ ಕಾವಲುಗಾರರಿಗೆ ನಾಯಕನಾಗಿದ್ದ ಪೋಟೀಫರನಿಗೆ ಮಾರಿದರು.