34
ದೀನಳ ಮಾನಭಂಗ
1 ದೀನಳು ಲೇಯಾ ಮತ್ತು ಯಾಕೋಬನ ಮಗಳು. ದೀನಳು ಒಂದು ದಿನ ಆ ದೇಶದ ಸ್ತ್ರೀಯರನ್ನು ನೋಡಲು ಹೊರಗೆ ಹೋದಳು.
2 ಆ ದೇಶದ ರಾಜನಾಗಿದ್ದ ಹಮೋರನ ಮಗನಾದ ಶೆಕೆಮನು ದೀನಳನ್ನು ಕಂಡು ಅವಳನ್ನು ಎಳೆದುಕೊಂಡು ಹೋಗಿ ಬಲಾತ್ಕಾರ ಮಾಡಿದನು.
3 ಶೆಕೆಮನಿಗೆ ದೀನಳ ಮೇಲೆ ಪ್ರೀತಿಯುಂಟಾಗಿ ಆಕೆಯನ್ನು ಮದುವೆ ಮಾಡಿಕೊಳ್ಳಲು ಇಷ್ಟಪಟ್ಟನು. ಅವನು ತನ್ನನ್ನು ಮದುವೆಯಾಗಬೇಕೆಂದು ಆಕೆಯ ಸಂಗಡ ಮನವೊಲಿಸುವ ಮಾತುಗಳನ್ನಾಡಿದನು.
4 ಶೆಕೆಮನು ತನ್ನ ತಂದೆಗೆ, “ದಯವಿಟ್ಟು ಈ ಹುಡುಗಿಯನ್ನು ನನಗೆ ಮದುವೆಮಾಡಿಸು” ಎಂದು ಕೇಳಿಕೊಂಡನು.
5 ಯಾಕೋಬನು ತನ್ನ ಮಗಳಿಗೆ ಶೆಕೆಮನಿಂದ ಮಾನಭಂಗವಾದ ಸುದ್ದಿಯನ್ನು ಕೇಳಿದನು. ಆದರೆ ಅವನ ಗಂಡುಮಕ್ಕಳೆಲ್ಲ ಕುರಿಗಳೊಂದಿಗೆ ಹೊಲದಲ್ಲಿದ್ದುದರಿಂದ ಅವರು ಮನೆಗೆ ಬರುವತನಕ ಏನೂ ಮಾಡಲಿಲ್ಲ.
6 ಆ ಸಮಯದಲ್ಲಿ ಶೆಕೆಮನ ತಂದೆಯಾದ ಹಮೋರನು ಯಾಕೋಬನೊಂದಿಗೆ ಮಾತಾಡಲು ಬಂದನು.
7 ಹೊಲದಲ್ಲಿದ್ದ ಯಾಕೋಬನ ಗಂಡುಮಕ್ಕಳು ನಡೆದ ಸಂಗತಿಯನ್ನು ಕೇಳಿ ತುಂಬ ಕೋಪಗೊಂಡರು. ಶೆಕೆಮನು ಯಾಕೋಬನ ಮಗಳನ್ನು ಮಾನಭಂಗ ಮಾಡಿ ಇಸ್ರೇಲರಿಗೆ ಅವಮಾನ ಮಾಡಿದ್ದರಿಂದ ಅವರು ಆವೇಶಗೊಂಡರು. ಶೆಕೆಮನು ತುಂಬ ಕೆಟ್ಟದ್ದನ್ನು ಮಾಡಿದ್ದರಿಂದ ಅಣ್ಣಂದಿರು ಹೊಲದಿಂದ ಹಿಂತಿರುಗಿದರು.
8 ಆದರೆ ಹಮೋರನು ದೀನಳ ಅಣ್ಣಂದಿರೊಡನೆ ಮಾತಾಡಿದನು. ಅವನು ಅವರಿಗೆ, “ನನ್ನ ಮಗನಾದ ಶೆಕೆಮನು ದೀನಳನ್ನು ತುಂಬ ಇಷ್ಟಪಡುತ್ತಾನೆ. ಅವನು ಆಕೆಯನ್ನು ಮದುವೆ ಮಾಡಿಕೊಳ್ಳಲು ದಯವಿಟ್ಟು ಅವಕಾಶಕೊಡಿ.
9 ಈ ಮದುವೆಯು ನಮಗಾಗಿರುವ ಒಂದು ವಿಶೇಷ ಒಪ್ಪಂದವನ್ನು ತೋರಿಸುತ್ತದೆ. ಅದೇನೆಂದರೆ, ನಮ್ಮ ಗಂಡಸರು ನಿಮ್ಮ ಸ್ತ್ರೀಯರನ್ನು ಮದುವೆಯಾಗಬಹುದು ಮತ್ತು ನಿಮ್ಮ ಗಂಡಸರು ನಮ್ಮ ಸ್ತ್ರೀಯರನ್ನು ಮದುವೆಯಾಗಬಹುದು.
10 ನೀವು ನಮ್ಮೊಂದಿಗೆ ಒಂದೇ ದೇಶದಲ್ಲಿ ವಾಸವಾಗಿರಬಹುದು. ನಿಮಗೆ ಇಲ್ಲಿ ಜಮೀನು ಮಾಡಿಕೊಳ್ಳಲು ಮತ್ತು ವ್ಯಾಪಾರ ಮಾಡಲು ಸ್ವತಂತ್ರವಿದೆ” ಎಂದು ಹೇಳಿದನು.
11 ಶೆಕೆಮನು ಸಹ ಯಾಕೋಬನೊಡನೆ ಮತ್ತು ದೀನಳ ಅಣ್ಣಂದಿರೊಡನೆ ಮಾತಾಡಿದನು. ಶೆಕೆಮನು ಅವರಿಗೆ, “ದಯವಿಟ್ಟು ನನ್ನನ್ನು ಸ್ವೀಕಾರಮಾಡಿ ನೀವು ಏನೇ ಹೇಳಿದರೂ ನಾನು ಮಾಡುತ್ತೇನೆ.
12 ನಾನು ದೀನಳನ್ನು ಮದುವೆಯಾಗಲು ನೀವು ನನಗೆ ಅವಕಾಶಕೊಟ್ಟರೆ ಸಾಕು. ನಾನು ನಿಮಗೆ ಯಾವ ಉಡುಗೊರೆಯನ್ನು ಬೇಕಾದರೂ ಕೊಡುವೆನು. ನೀವು ಏನು ಕೇಳಿದರೂ ಕೊಡುವೆನು. ಆದರೆ ನನಗೆ ದೀನಳನ್ನು ಮದುವೆ ಮಾಡಿಸಿಕೊಡಿ” ಎಂದು ಕೇಳಿಕೊಂಡನು.
13 ಯಾಕೋಬನ ಗಂಡುಮಕ್ಕಳು ಶೆಕೆಮನಿಗೂ ಅವನ ತಂದೆಗೂ ಸುಳ್ಳು ಹೇಳಲು ನಿರ್ಧರಿಸಿದರು. ತಮ್ಮ ತಂಗಿಯಾದ ದೀನಳಿಗೆ ಶೆಕೆಮನು ಅಂಥ ಕೆಟ್ಟಕಾರ್ಯವನ್ನು ಮಾಡಿದ್ದರಿಂದ ಅವರು ಇನ್ನೂ ಆವೇಶದಿಂದ ಇದ್ದರು.
14 ಆದ್ದರಿಂದ ಆಕೆಯ ಅಣ್ಣಂದಿರು ಅವನಿಗೆ, “ನೀನು ನಮ್ಮ ತಂಗಿಯನ್ನು ಮದುವೆಯಾಗಲು ನಾವು ಅವಕಾಶ ಕೊಡುವಂತಿಲ್ಲ; ಯಾಕೆಂದರೆ ನಿನಗಿನ್ನೂ ಸುನ್ನತಿಯಾಗಿಲ್ಲ. ನಮ್ಮ ತಂಗಿಯು ನಿನ್ನನ್ನು ಮದುವೆಯಾಗುವುದು ತಪ್ಪಾಗುತ್ತದೆ.
15 ಆದರೆ ನೀನು ಮತ್ತು ನಿಮ್ಮ ಪಟ್ಟಣದಲ್ಲಿರುವ ಪ್ರತಿಯೊಬ್ಬ ಗಂಡಸು ನಮ್ಮಂತೆ ಸುನ್ನತಿ ಮಾಡಿಸಿಕೊಂಡರೆ ನೀನು ಆಕೆಯನ್ನು ಮದುವೆಯಾಗಬಹುದು.
16 ಆಮೇಲೆ ನಿಮ್ಮ ಗಂಡಸರು ನಮ್ಮ ಸ್ತ್ರೀಯರನ್ನು ಮದುವೆಯಾಗಬಹುದು ಮತ್ತು ನಮ್ಮ ಗಂಡಸರು ನಿಮ್ಮ ಸ್ತ್ರೀಯರನ್ನು ಮದುವೆಯಾಗಬಹುದು. ಆಗ ನಾವು ಒಂದೇ ಜನಾಂಗವಾಗುವೆವು.
17 ಆದರೆ ನೀವು ಸುನ್ನತಿ ಮಾಡಿಸಿಕೊಳ್ಳದಿದ್ದರೆ ನಾವು ದೀನಳನ್ನು ಕರೆದುಕೊಂಡು ಹೋಗುತ್ತೇವೆ” ಎಂದು ಹೇಳಿದರು.
18 ಅವರು ಹೇಳಿದ್ದು ಹಮೋರನಿಗೂ ಶೆಕೆಮನಿಗೂ ಒಳ್ಳೆಯದೆಂದು ತೋಚಿತು.
19 ದೀನಳ ಅಣ್ಣಂದಿರು ಹೇಳಿದ್ದನ್ನು ಮಾಡಲು ಶೆಕೆಮನು ಸಂತೋಷದಿಂದ ಒಪ್ಪಿಕೊಂಡನು.
ಶೆಕೆಮನಿಗೆ ಅವರ ಕುಟುಂಬದಲ್ಲಿ ತುಂಬ ಗೌರವವಿತ್ತು.
20 ಹಮೋರನು ಮತ್ತು ಶೆಕೆಮನು ತಮ್ಮ ನಗರದ ಸಭಾಸ್ಥಳಕ್ಕೆ ಹೋದರು. ಅವರು ಪಟ್ಟಣದ ಗಂಡಸರೊಂದಿಗೆ ಮಾತಾಡಿ,
21 “ಈ ಇಸ್ರೇಲರಿಗೆ ನಮ್ಮ ಸ್ನೇಹಿತರಾಗಿರಲು ಇಷ್ಟ; ಇವರು ನಮ್ಮ ದೇಶದಲ್ಲಿ ವಾಸವಾಗಿದ್ದುಕೊಂಡು ನಮ್ಮೊಂದಿಗೆ ಸಮಾಧಾನದಿಂದಿರುವುದು ನಮಗೂ ಇಷ್ಟ; ನಮ್ಮೆಲ್ಲರಿಗೂ ಬೇಕಾಗುವಷ್ಟು ಭೂಮಿ ನಮ್ಮಲ್ಲಿದೆ. ನಾವು ಅವರ ಸ್ತ್ರೀಯರನ್ನು ಮದುವೆಯಾಗವುದಕ್ಕೂ ನಮ್ಮ ಸ್ತ್ರೀಯರನ್ನು ಅವರಿಗೆ ಮದುವೆ ಮಾಡಿಕೊಡುವುದಕ್ಕೂ ಸಂತೋಷಪಡುತ್ತೇವೆ.
22 ಆದರೆ ನಾವು ಮಾಡಬೇಕಾದ ಒಂದೇ ಒಂದು ಕಾರ್ಯವೇನೆಂದರೆ, ಇಸ್ರೇಲರಂತೆ ನಮ್ಮ ಎಲ್ಲಾ ಗಂಡಸರು ಸುನ್ನತಿ ಮಾಡಿಸಿಕೊಳ್ಳಬೇಕು.
23 ನಾವು ಹೀಗೆ ಮಾಡಿದರೆ, ಅವರ ಎಲ್ಲಾ ದನಕುರಿಗಳಿಂದಲೂ ಪಶುಗಳಿಂದಲೂ ಐಶ್ವರ್ಯವಂತರಾಗುತ್ತೇವೆ. ನಾವು ಈ ಒಪ್ಪಂದವನ್ನು ಅವರೊಂದಿಗೆ ಮಾಡಿಕೊಂಡರೆ ಅವರು ನಮ್ಮೊಂದಿಗೆ ಇಲ್ಲಿ ವಾಸಿಸುವರು” ಎಂದು ಹೇಳಿದರು.
24 ಸಭಾಸ್ಥಳದಲ್ಲಿದ್ದ ಗಂಡಸರೆಲ್ಲರೂ ಹಮೋರ ಮತ್ತು ಶೆಕೆಮರ ಮಾತಿಗೆ ಒಪ್ಪಿಕೊಂಡರು. ಬಳಿಕ ಎಲ್ಲಾ ಗಂಡಸರು ಸುನ್ನತಿ ಮಾಡಿಸಿಕೊಂಡರು.
25 ಮೂರು ದಿನಗದರೂ ಸುನ್ನತಿ ಮಾಡಿಸಿಕೊಂಡಿದ್ದ ಗಂಡಸರು ಇನ್ನೂ ಗಾಯದ ನೋವಿನಲ್ಲಿದ್ದರು. ಈ ಸಮಯದಲ್ಲಿ ಗಂಡಸರು ಬಲಹೀನರಾಗಿರುತ್ತಾರೆ ಎಂಬುದು ಯಾಕೋಬನ ಇಬ್ಬರು ಗಂಡುಮಕ್ಕಳಾದ ಸಿಮೆಯೋನ್ ಮತ್ತು ಲೇವಿಗೆ ತಿಳಿದಿತ್ತು. ಆದ್ದರಿಂದ ಅವರು ಪಟ್ಟಣಕ್ಕೆ ಹೋಗಿ ಅಲ್ಲಿದ್ದ ಎಲ್ಲಾ ಗಂಡಸರನ್ನು ಕೊಂದುಹಾಕಿದರು.
26 ದೀನಳ ಅಣ್ಣಂದಿರಾದ ಸಿಮೆಯೋನನು ಮತ್ತು ಲೇವಿಯು ಹಮೋರನನ್ನೂ ಅವನ ಮಗನಾದ ಶೆಕೆಮನನ್ನೂ ಕೊಂದುಹಾಕಿ ದೀನಳನ್ನು ಶೆಕಮನ ಮನೆಯಿಂದ ಕರೆದುಕೊಂಡು ಬಂದರು.
27 ಯಾಕೋಬನ ಗಂಡುಮಕ್ಕಳು ಪಟ್ಟಣದೊಳಗೆ ಹೋಗಿ ಅಲ್ಲಿದ್ದ ಪ್ರತಿಯೊಂದನ್ನು ತೆಗೆದುಕೊಂಡರು. ತಮ್ಮ ತಂಗಿಗೆ ಶೆಕೆಮನು ಮಾಡಿದ ಮಾನಭಂಗದಿಂದ ಅವರು ಇನ್ನೂ ಕೋಪದಲ್ಲಿದ್ದರು.
28 ಹೀಗೆ ದೀನಳ ಅಣ್ಣಂದಿರು ಅವರ ದನಕುರಿಗಳನ್ನೂ ಕತ್ತೆಗಳನ್ನೂ ಪಟ್ಟಣದಲ್ಲಿಯೂ ಹೊಲದಲ್ಲಿಯೂ ಇದ್ದ ಆಸ್ತಿಯೆಲ್ಲವನ್ನೂ ತೆಗೆದುಕೊಂಡರು.
29 ಅವರ ಹೆಂಡತಿಯರನ್ನೂ ಮಕ್ಕಳನ್ನೂ ಸೆರೆಹಿಡಿದು ಮನೆಯಲ್ಲಿದ್ದದ್ದನ್ನೆಲ್ಲಾ ದೋಚಿಕೊಂಡರು.
30 ಆದರೆ ಯಾಕೋಬನು ಸಿಮೆಯೋನನಿಗೆ ಮತ್ತು ಲೇವಿಗೆ, “ನೀವು ನನ್ನನ್ನು ಅಪಾಯಕ್ಕೆ ಗುರಿಮಾಡಿದಿರಿ. ಈ ದೇಶದಲ್ಲಿರುವ ಎಲ್ಲಾ ಕಾನಾನ್ಯರು ಮತ್ತು ಪೆರಿಜೀಯರು ನನ್ನನ್ನು ದ್ವೇಷಿಸಿ ನನಗೆ ವಿರೋಧವಾಗುವರು. ನನಗಿರುವ ಜನರು ಕೆಲವರೇ. ಈ ದೇಶದಲ್ಲಿರುವ ಜನರು ಒಟ್ಟಾಗಿ ಸೇರಿಕೊಂಡು ನನಗೆ ವಿರೋಧವಾಗಿ ಹೋರಾಡಿದರೆ ನಾನೂ ನನ್ನ ಜನರೆಲ್ಲರೂ ನಾಶವಾಗುವೆವು” ಎಂದು ಹೇಳಿದನು.
31 ಆದರೆ ದೀನಳ ಅಣ್ಣಂದಿರು, “ನಮ್ಮ ತಂಗಿಯನ್ನು ಆ ಜನರು ಸೂಳೆಯಂತೆ ಉಪಯೋಗಿಸಿಕೊಳ್ಳಲು ನಾವು ಬಿಡಬೇಕೇ? ಇಲ್ಲ, ನಮ್ಮ ತಂಗಿಗೆ ಆ ಜನರು ಮಾಡಿದ್ದು ತಪ್ಪು” ಎಂದು ಹೇಳಿದರು.