14
ಲೋಟನ ಸೆರೆ
1 ಆ ದಿನಗಳಲ್ಲಿ ಅಮ್ರಾಫೆಲನು ಶಿನಾರಿನ ರಾಜನಾಗಿದ್ದನು; ಅರಿಯೋಕನು ಎಲ್ಲಸಾರಿನ ರಾಜನಾಗಿದ್ದನು; ಕೆದೊರ್ಲಗೋಮರನು ಏಲಾಮಿನ ರಾಜನಾಗಿದ್ದನು; ತಿದ್ಗಾಲನು ಗೋಯಿಮದ ರಾಜನಾಗಿದ್ದನು.
2 ಈ ರಾಜರುಗಳೆಲ್ಲ ಸೊದೋಮಿನ ರಾಜನಾದ ಬೆರಗನಿಗೂ ಗೊಮೋರದ ರಾಜನಾದ ಬಿರ್ಶಗನಿಗೂ ಅದ್ಮಾಹದ ರಾಜನಾದ ಶಿನಾಬನಿಗೂ ಚೆಬೋಯೀಮಿನ ರಾಜನಾದ ಶೆಮೇಬರನಿಗೂ ಚೋಗರ್ ಎಂಬ ಬೇಲಗಿನ ರಾಜನಿಗೂ ವಿರುದ್ಧವಾಗಿ ಯುದ್ಧಮಾಡಿದರು.
3 ಈ ರಾಜರುಗಳೆಲ್ಲ ಸಿದ್ದೀಮ್ ಕಣಿವೆಯಲ್ಲಿ ತಮ್ಮ ಸೈನ್ಯಗಳನ್ನು ಒಟ್ಟಿಗೆ ಸೇರಿಸಿದರು. (ಸಿದ್ದೀಮ್ ಕಣಿವೆಯು ಈಗ ಉಪ್ಪುಸಮುದ್ರವಾಗಿದೆ).
4 ಈ ರಾಜರುಗಳು ಕೆದೊರ್ಲಗೋಮರನ ಅಧೀನದಲ್ಲಿ ಹನ್ನೆರಡು ವರ್ಷವಿದ್ದರು. ಆದರೆ ಹದಿಮೂರನೆಯ ವರ್ಷದಲ್ಲಿ, ಅವರೆಲ್ಲರೂ ಅವನಿಗೆ ವಿರೋಧವಾಗಿ ದಂಗೆ ಎದ್ದರು.
5 ಆದ್ದರಿಂದ ಹದಿನಾಲ್ಕನೆಯ ವರ್ಷದಲ್ಲಿ, ರಾಜನಾದ ಕೆದೊರ್ಲಗೋಮರನು ಮತ್ತು ಅವನೊಡನಿದ್ದ ರಾಜರುಗಳು ಅವರ ವಿರೋಧವಾಗಿ ಯುದ್ಧಮಾಡಲು ಬಂದರು. ಕೆದೊರ್ಲಗೋಮರನು ಮತ್ತು ಅವನೊಡನಿದ್ದ ರಾಜರುಗಳು ಅಷ್ಟರೋತ್-ಕರ್ನಯಿಮಿನಲ್ಲಿದ್ದ ರೆಫಾಯರನ್ನೂ ಹಾಮಿನಲ್ಲಿದ್ದ ಜೂಜ್ಯರನ್ನೂ ಶಾವೆಕೆರ್ಯಾತಯಿಮಿನಲ್ಲಿದ್ದ ಏಮಿಯರನ್ನೂ ಸೋಲಿಸಿದರು.
6 ಇದಲ್ಲದೆ ಅವರು ಹೋರಿಯರನ್ನು ಬೆಟ್ಟದ ಸೀಮೆಯಿಂದ ಮರುಭೂಮಿಯ ಸಮೀಪದಲ್ಲಿರುವ ಎಲ್ಪಾರಾನಿನವರೆಗೂ ಹಿಂದಟ್ಟಿದರು.
7 ಆ ಬಳಿಕ ರಾಜ ಕೆದೊರ್ಲಗೋಮರನು ಉತ್ತರದ ಕಡೆಗೆ ತಿರುಗಿ ಕಾದೇಶ್ ಎನ್ನುವ ಎನ್ಮಿಷ್ಪಾಟಿಗೆ ಬಂದು ಎಲ್ಲಾ ಅಮಾಲೇಕ್ಯರನ್ನು ಸೋಲಿಸಿದನು. ಇದಲ್ಲದೆ ಅವನು ಹಚಚೋನ್ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನು ಸೋಲಿಸಿದನು.
8 ಆ ಕಾಲದಲ್ಲಿ, ಸೊದೋಮಿನ ರಾಜನೂ ಗೊಮೋರದ ರಾಜನೂ ಅದ್ಮಾಹದ ರಾಜನೂ ಚೆಬೋಯೀಮಿನ ರಾಜನೂ ಬೇಲಗದ, ಅಂದರೆ ಚೋಗರದ ರಾಜನೂ ಒಟ್ಟಾಗಿ ಸೇರಿಕೊಂಡು ತಮ್ಮ ಶತ್ರುಗಳ ವಿರುದ್ಧವಾಗಿ ದಂಡೆತ್ತಿಕೊಂಡು ಸಿದ್ದೀಮ್ ಕಣಿವೆಗೆ ಹೋದರು.
9 ಅವರು ಏಲಾಮಿನ ರಾಜ ಕೆದೊರ್ಲಗೋಮರನಿಗೂ ಗೋಯಿಮದ ರಾಜ ತಿದ್ಗಾಲನಿಗೂ ಶಿನಾರಿನ ರಾಜ ಅಮ್ರಾಫೆಲನಿಗೂ, ಎಲ್ಲಸಾರಿನ ರಾಜ ಅರಿಯೋಕನಿಗೂ ವಿರುದ್ಧವಾಗಿ ಹೋರಾಡಿದರು. ಹೀಗೆ ನಾಲ್ಕು ಮಂದಿ ರಾಜರು ಐದು ಮಂದಿ ರಾಜರ ವಿರುದ್ಧವಾಗಿ ಹೋರಾಡಿದರು.
10 ಸಿದ್ದೀಮ್ ಕಣಿವೆಯಲ್ಲಿ ಕಲ್ಲರಗಿನ ಕೆಸರುಕುಣಿಗಳು ಬಹಳಷ್ಟಿದ್ದವು. ಸೊದೋಮ್ ಮತ್ತು ಗೊಮೋರಗಳ ರಾಜರುಗಳು ಮತ್ತು ಅವರ ಸೈನ್ಯಗಳವರು ಓಡಿಹೋಗುವಾಗ ಈ ಕುಣಿಗಳಲ್ಲಿ ಬಿದ್ದುಹೋದರು; ಉಳಿದವರು ಬೆಟ್ಟಗಳಿಗೆ ಓಡಿಹೋದರು.
11 ಗೆದ್ದವರು ಸೊದೋಮ್ ಮತ್ತು ಗೊಮೋರಗಳ ಜನರು ಹೊಂದಿದ್ದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡರು. ಅವರು ಅವರೆಲ್ಲರ ಆಹಾರವನ್ನೂ ಬಟ್ಟೆಗಳನ್ನೂ ತೆಗೆದುಕೊಂಡರು.
12 ಅಬ್ರಾಮನ ಸಹೋದರನಾದ ಲೋಟನು ಸೊದೋಮಿನಲ್ಲಿ ವಾಸವಾಗಿದ್ದನು. ಶತ್ರುಗಳು ಅವನನ್ನು ಸೆರೆಹಿಡಿದು, ಅವನ ಸ್ವತ್ತುಗಳನ್ನೆಲ್ಲ ದೋಚಿಕೊಂಡು ಹೋದರು.
13 ತಪ್ಪಿಸಿಕೊಂಡ ಒಬ್ಬನು ಇಬ್ರಿಯನಾದ ಅಬ್ರಾಮನ ಬಳಿಗೆ ಹೋಗಿ ನಡೆದ ವಿಷಯವನ್ನೆಲ್ಲಾ ತಿಳಿಸಿದನು. ಅಬ್ರಾಮನು ಅಮೋರಿಯನಾದ ಮಮ್ರೆಯನ ತೋಪಿನ ಬಳಿಯಲ್ಲಿ ವಾಸವಾಗಿದ್ದನು. ಮಮ್ರೆ, ಎಷ್ಕೋಲ ಮತ್ತು ಆನೇರ್ ಒಬ್ಬರಿಗೊಬ್ಬರು ಸಹಾಯಮಾಡಲು ಒಂದು ಒಪ್ಪಂದವನ್ನು ಮಾಡಿಕೊಂಡಿದ್ದರು. ಅಲ್ಲದೆ ಅಬ್ರಾಮನಿಗೂ ಸಹಾಯಮಾಡುವುದಾಗಿ ಒಂದು ಒಪ್ಪಂದಕ್ಕೆ ಸಹಿ ಮಾಡಿದ್ದರು.
ಅಬ್ರಾಮನು ಲೋಟನನ್ನು ಬಿಡಿಸಿದ್ದು
14 ಲೋಟನು ಸೆರೆಯಾಳಾಗಿರುವುದು ಅಬ್ರಾಮನಿಗೆ ತಿಳಿಯಿತು. ಆದ್ದರಿಂದ ಅಬ್ರಾಮನು ತನ್ನ ಮನೆಯಲ್ಲಿ ಹುಟ್ಟಿದ ಗಂಡಾಳುಗಳನ್ನೆಲ್ಲ ಒಟ್ಟಾಗಿ ಸೇರಿಸಿದನು. ಅವರಲ್ಲಿ ಮುನ್ನೂರ ಹದಿನೆಂಟು ಮಂದಿ ತರಬೇತಿ ಹೊಂದಿದ್ದ ಸೈನಿಕರಾಗಿದ್ದರು. ಅಬ್ರಾಮನು ಅವರೊಡನೆ ಹೊರಟು ಶತ್ರುಗಳನ್ನು ದಾನ್ ಊರಿನವರೆಗೂ ಹಿಂದಟ್ಟಿದನು.
15 ಆ ರಾತ್ರಿ ಅವನು ಮತ್ತು ಅವನ ಸೇವಕರು ಹಠಾತ್ತನೆ ಶತ್ರುಗಳನ್ನು ಎದುರಿಸಿ ಸೋಲಿಸಿದರು; ದಮಸ್ಕಕ್ಕೆ ಉತ್ತರದಲ್ಲಿರುವ ಹೋಬಾದವರೆಗೂ ಹಿಂದಟ್ಟಿದರು.
16 ಆಮೇಲೆ ಶತ್ರುಗಳು ಅಪಹರಿಸಿದ್ದ ಎಲ್ಲಾ ವಸ್ತುಗಳನ್ನು ಮತ್ತು ಲೋಟನ ಆಸ್ತಿಯನ್ನು ಅಬ್ರಾಮನು ತೆಗೆದುಕೊಂಡು ಲೋಟನೊಡನೆ ಬಂದನು. ಅಲ್ಲದೆ ಸೆರೆಹಿಡಿಯಲ್ಪಟ್ಟಿದ್ದ ಸ್ತ್ರೀಯರನ್ನು ಮತ್ತು ಇತರ ಜನರನ್ನು ಹಿಂದಕ್ಕೆ ಕರೆದುಕೊಂಡು ಬಂದನು.
17 ಅಬ್ರಾಮನು ಕೆದೊರ್ಲಗೋಮರನನ್ನೂ ಮತ್ತು ಅವನೊಡನಿದ್ದ ರಾಜರುಗಳನ್ನೂ ಸೋಲಿಸಿದ ಮೇಲೆ ತನ್ನ ಮನೆಗೆ ಹಿಂತಿರುಗಿದನು. ಆಗ ಸೊದೋಮಿನ ರಾಜನು ಅಬ್ರಾಮನನ್ನು ಭೇಟಿಯಾಗಲು ಶಾವೆ ಕಣಿವೆಗೆ ಹೋದನು. (ಈಗ ಇದಕ್ಕೆ ರಾಜನ ಕಣಿವೆ ಎಂದು ಕರೆಯುತ್ತಾರೆ.)
ಮೆಲ್ಕೀಚೆದೆಕನು
18 ಸಾಲೇಮಿನ ರಾಜನಾದ ಮೆಲ್ಕೀಚೆದೆಕನು ಸಹ ಅಬ್ರಾಮನನ್ನು ಭೇಟಿಯಾಗಲು ಹೋದನು. ಮಹೋನ್ನತನಾದ ದೇವರ ಯಾಜಕನಾಗಿದ್ದ ಅವನು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಂಡು ಬಂದು,
19 ಅಬ್ರಾಮನನ್ನು ಹೀಗೆ ಆಶೀರ್ವದಿಸಿದನು:
“ಅಬ್ರಾಮನೇ, ಮಹೋನ್ನತನಾದ ದೇವರು ನಿನ್ನನ್ನು ಆಶೀರ್ವದಿಸಲಿ.
ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದಾತನು ಆತನೇ.
20 ನಿನ್ನ ಶತ್ರುಗಳನ್ನು ಸೋಲಿಸಲು
ನಿನಗೆ ಸಹಾಯ ಮಾಡಿದ ಮಹೋನ್ನತನಾದ ದೇವರಿಗೆ ಕೊಂಡಾಟವಾಗಲಿ.”
ಅಬ್ರಾಮನು ಯುದ್ಧದಿಂದ ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಮೆಲ್ಕೀಚೆದೆಕನಿಗೆ ಕೊಟ್ಟನು.
21 ಬಳಿಕ ಸೊದೋಮಿನ ರಾಜನು ಅಬ್ರಾಮನಿಗೆ, “ಈ ವಸ್ತುಗಳನ್ನೆಲ್ಲ ನೀನೇ ಇಟ್ಟುಕೊ. ಶತ್ರುಗಳು ವಶಪಡಿಸಿಕೊಂಡಿರುವ ನನ್ನ ಜನರನ್ನು ಮಾತ್ರ ನನಗೆ ಕೊಡು” ಎಂದು ಹೇಳಿದನು.
22 ಆದರೆ ಅಬ್ರಾಮನು ಅವನಿಗೆ, “ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ ಮಹೋನ್ನತನಾಗಿರುವ ದೇವರಾದ ಯೆಹೋವನಿಗೆ ಪ್ರಮಾಣಮಾಡಿ ಹೇಳುವುದೇನೆಂದರೆ,
23 ನಿನ್ನದಾಗಿರುವ ಯಾವುದನ್ನೂ ನಾನು ಇಟ್ಟುಕೊಳ್ಳುವುದಿಲ್ಲ; ಅದು ದಾರವಾಗಿದ್ದರೂ, ಪಾದರಕ್ಷೆಯ ಬಾರಾಗಿದ್ದರೂ, ನಾನಿಟ್ಟುಕೊಳ್ಳುವುದಿಲ್ಲ. ‘ನಾನು ಅಬ್ರಾಮನನ್ನು ಐಶ್ವರ್ಯವಂತನನ್ನಾಗಿ ಮಾಡಿದೆ’ ಎಂದು ನೀನು ಹೇಳಿಕೊಳ್ಳುವುದು ನನಗೆ ಬೇಕಾಗಿಲ್ಲ.
24 ನನ್ನ ಯೌವನಸ್ಥರು ತಿಂದ ಆಹಾರದ ಹೊರತು ಬೇರೆ ಯಾವುದನ್ನೂ ನಾನು ಸ್ವೀಕರಿಸುವುದಿಲ್ಲ. ಆದರೆ ಬೇರೆ ಜನರಿಗೆ ಅವರ ಪಾಲನ್ನು ಕೊಡು. ನಾವು ಯುದ್ಧದಲ್ಲಿ ಗೆದ್ದುತಂದ ವಸ್ತುಗಳನ್ನು ತೆಗೆದುಕೊ; ಆನೇರ್, ಎಷ್ಕೋಲ ಮತ್ತು ಮಮ್ರೆಯರಿಗೆ ಅವರ ಪಾಲನ್ನು ಕೊಡು. ಈ ಜನರು ಯುದ್ಧದಲ್ಲಿ ನನಗೆ ಸಹಾಯ ಮಾಡಿದರು” ಎಂದು ಹೇಳಿದನು.