23
ಇಸ್ರೇಲರ ದೇವಾರಾಧನೆಗೆ ಯೋಗ್ಯರಾದವರು
1 “ಜನನಾಂಗದ ಬೀಜವನ್ನು ಹೊಡಿಸಿಕೊಂಡವನಾಗಲಿ ಜನನಾಂಗದ ಒಂದು ಭಾಗವನ್ನು ಕತ್ತರಿಸಿಕೊಂಡವನಾಗಲಿ ಇಸ್ರೇಲ್ ಜನರೊಂದಿಗೆ ದೇವಾರಾಧನೆ ಮಾಡಬಾರದು.
2 ಒಬ್ಬನ ತಂದೆತಾಯಿಗಳು ಕಾನೂನು ಬದ್ಧವಾಗಿ ಮದುವೆಯಾಗಿಲ್ಲದಿದ್ದರೆ, ಅವನು ದೇವಾರಾಧನೆಯಲ್ಲಿ ಇಸ್ರೇಲರೊಡನೆ ಸೇರಕೂಡದು. ಅವನ ಸಂತತಿಯವರು ಹತ್ತನೆಯ ತಲೆಮಾರಿನ ತನಕ ಇಸ್ರೇಲ್ ಸಮೂಹದೊಂದಿಗೆ ಆರಾಧನೆ ಮಾಡಬಾರದು.
3 “ಅಮ್ಮೋನಿಯರಾಗಲಿ ಮೋವಾಬ್ಯರಾಗಲಿ ಇಸ್ರೇಲರೊಂದಿಗೆ ಸೇರಿ ದೇವಾರಾಧನೆ ಮಾಡಕೂಡದು. ಅವರ ಸಂತತಿಯ ಹತ್ತನೆಯ ತಲೆಮಾರಿನವರೆಗೂ ಆರಾಧನೆ ಮಾಡಬಾರದು.
4 ಯಾಕೆಂದರೆ ಇಸ್ರೇಲರು ಈಜಿಪ್ಟಿನಿಂದ ಹೊರಟುಬಂದು ಪ್ರಯಾಣದಲ್ಲಿದ್ದಾಗ ಅವರಿಗೆ ರೊಟ್ಟಿಯನ್ನಾಗಲಿ ನೀರನ್ನಾಗಲಿ ಕೊಡಲು ಅವರು ನಿರಾಕರಿಸಿದ್ದರು. ಅವರು ಮೆಸಪೊಟೋಮಿಯದಿಂದ ಬಿಳಾಮನನ್ನು ಕರೆಸಿ ಇಸ್ರೇಲರನ್ನು ಶಪಿಸುವಂತೆ ಬಲವಂತಪಡಿಸಿದರು.
5 ಆದರೆ ಯೆಹೋವನು ನಿಮ್ಮನ್ನು ಪ್ರೀತಿಸುತ್ತಿದ್ದುದರಿಂದ ಆ ಶಾಪವನ್ನು ನಿಮಗೆ ಆಶೀರ್ವಾದವಾಗಿ ಪರಿವರ್ತಿಸಿದನು.
6 ಅಮ್ಮೋನಿಯರೊಂದಿಗಾಗಲಿ ಮೋವಾಬ್ಯರೊಂದಿಗಾಗಲಿ ನೀವು ಸಂಧಾನ ಮಾಡಿಕೊಳ್ಳಲೇಬಾರದು; ನಿಮ್ಮ ಜೀವಮಾನವೆಲ್ಲಾ ಅವರೊಂದಿಗೆ ಸ್ನೇಹತ್ವದಲ್ಲಿರಬಾರದು.
People the Israelites Must Accept
7 “ಎದೋಮ್ಯರನ್ನು ನೀವು ದ್ವೇಷಿಸಬಾರದು, ಅವರು ನಿಮ್ಮ ಸಂಬಂಧಿಕರಾಗಿದ್ದಾರೆ. ಈಜಿಪ್ಟಿನವರನ್ನು ನೀವು ದ್ವೇಷಿಸಬಾರದು, ಅವರ ದೇಶದಲ್ಲಿ ನೀವು ಪರದೇಶಿಗಳಾಗಿದ್ದಿರಲ್ಲಾ.
8 ಎದೋಮ್ಯರ ಮತ್ತು ಈಜಿಪ್ಟಿನವರ ಮೂರನೆ ತಲೆಮಾರಿನವರು ಇಸ್ರೇಲರೊಂದಿಗೆ ದೇವಾರಾಧನೆ ಮಾಡಬಹುದು.
ಪಾಳೆಯವನ್ನು ಶುದ್ಧವಾಗಿಡಬೇಕು
9 “ನಿಮ್ಮ ಸೈನ್ಯವು ವೈರಿಗಳೊಂದಿಗೆ ಯುದ್ಧಮಾಡಲು ಹೋದಾಗ ನಿಮ್ಮನ್ನು ಅಶುದ್ಧಪಡಿಸುವ ಪ್ರತಿಯೊಂದರಿಂದಲೂ ನೀವು ದೂರವಾಗಿರಿ.
10 ಒಬ್ಬನಿಗೆ ರಾತ್ರಿ ಕಾಲದಲ್ಲಿ ವೀರ್ಯಸ್ಖಲನವಾದರೆ ಅವನು ಪಾಳೆಯದಿಂದ ಹೊರಗೆ ಹೋಗಿ ಪ್ರತ್ಯೇಕವಾಗಿರಬೇಕು.
11 ಸಾಯಂಕಾಲವಾದಾಗ ಅವನು ಸ್ನಾನಮಾಡಿ ಸೂರ್ಯ ಮುಳುಗಿದ ಬಳಿಕ ಪಾಳೆಯದೊಳಕ್ಕೆ ಬರಬಹುದು.
12 “ಪಾಳೆಯದ ಹೊರಗೆ ಬಹಿರ್ದೇಶಕ್ಕೆ ಹೋಗಲು ಒಂದು ಸ್ಥಳವನ್ನು ನೇಮಿಸಬೇಕು.
13 ನಿಮ್ಮ ಆಯುಧಗಳೊಂದಿಗೆ ನೀವು ಒಂದು ಕೋಲನ್ನು ಇಟ್ಟುಕೊಳ್ಳಬೇಕು. ಈ ಕೋಲಿನಿಂದ ಮಣ್ಣು ಅಗೆದು ನೆಲದಲ್ಲಿ ಚಿಕ್ಕ ಗುಂಡಿ ತೋಡಲೂ ಮತ್ತು ಹೊಟ್ಟೆ ಖಾಲಿ ಮಾಡಿದ ಬಳಿಕ ಆ ಗುಂಡಿಯನ್ನು ಮಣ್ಣಿನಿಂದ ಮುಚ್ಚಲೂ ಸಹಾಯವಾಗುವುದು.
14 ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಸಂರಕ್ಷಿಸಲೂ ವೈರಿಗಳನ್ನು ಸೋಲಿಸುವಂತೆ ಸಹಾಯ ಮಾಡಲೂ ನಿಮ್ಮೊಂದಿಗೆ ಪಾಳೆಯದಲ್ಲಿರುವುದರಿಂದ ನಿಮ್ಮ ಪಾಳೆಯವು ಪವಿತ್ರವಾಗಿರಬೇಕು. ಇಲ್ಲದಿದ್ದಲ್ಲಿ ನಿಮ್ಮ ಪಾಳೆಯದಲ್ಲಿರುವ ಹೊಲಸನ್ನು ನೋಡಿ ಆತನು ಹಿಂದಿರುಗಿ ಹೋಗುವನು.
ಇತರ ವಿಧಿನಿಯಮಗಳು
15 “ಒಬ್ಬ ಗುಲಾಮನು ತನ್ನ ಧಣಿಯ ಬಳಿಯಿಂದ ನಿಮ್ಮ ಬಳಿಗೆ ಓಡಿ ಬಂದರೆ ನೀವು ಅವನ ಧಣಿಗೆ ಅವನನ್ನು ಒಪ್ಪಿಸಬಾರದು.
16 ಅವನು ನಿಮ್ಮ ಬಳಿಯಲ್ಲಿ ಇರಲು ಇಷ್ಟಪಟ್ಟರೆ ಅಥವಾ ಬೇರೆ ಊರಿಗೆ ಹೋಗಲು ಇಷ್ಟಪಟ್ಟರೆ ನೀವು ಅವನಿಗೆ ತೊಂದರೆಕೊಡಬಾರದು.
17 “ಇಸ್ರೇಲರ ಗಂಡಸಾಗಲಿ ಹೆಂಗಸಾಗಲಿ ದೇವಸ್ಥಾನದ ವೇಶ್ಯೆಯಾಗಬಾರದು.
18 ಸೂಳೆತನದಿಂದ ಗಳಿಸಿದ ಹಣವನ್ನು ನಿಮ್ಮ ದೇವರಾದ ಯೆಹೋವನ ವಿಶೇಷ ವಾಸಸ್ಥಾನಕ್ಕೆ ತೆಗೆದುಕೊಂಡು ಬರಬಾರದು. ಒಬ್ಬನು ತಾನು ಹೊತ್ತುಕೊಂಡ ಹರಕೆಯನ್ನು ಆ ಹಣದಿಂದ ಪೂರೈಸಕೂಡದು. ಯಾಕೆಂದರೆ ಲೈಂಗಿಕ ಪಾಪದಲ್ಲಿ ತಮ್ಮ ದೇಹಗಳನ್ನು ಮಾರುವವರನ್ನು ನಿಮ್ಮ ದೇವರಾದ ಯೆಹೋವನು ದ್ವೇಷಿಸುತ್ತಾನೆ; ಲೈಂಗಿಕ ಪಾಪಗಳ ಆದಾಯದಿಂದ ಬಂದ ಹಣದಿಂದ ಖರೀದಿ ಮಾಡಿದ ಕಾಣಿಕೆಗಳನ್ನು ಆತನು ದ್ವೇಷಿಸುತ್ತಾನೆ.
19 “ನೀವು ಇನ್ನೊಬ್ಬ ಇಸ್ರೇಲಿಗೆ ಸಾಲಕೊಟ್ಟರೆ ಅದಕ್ಕೆ ಬಡ್ಡಿ ವಸೂಲು ಮಾಡಬಾರದು.
20 ಪರದೇಶಸ್ಥರಿಗೆ ನೀವು ಬಡ್ಡಿಗೆ ಸಾಲ ಕೊಡಬಹುದು. ಆದರೆ ಸ್ವದೇಶದವನಾದ ಇಸ್ರೇಲಿನವನಿಗೆ ಬಡ್ಡಿಗೆ ಸಾಲ ಕೊಡಬಾರದು. ನೀವು ಹೀಗೆ ಮಾಡಿದ್ದಲ್ಲಿ, ನೀವು ಹೋಗಿ ನೆಲೆಸುವ ದೇಶದಲ್ಲಿ ನೀವು ಮಾಡುವ ಪ್ರತಿಯೊಂದರಲ್ಲೂ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸುವನು.
21 “ನೀವು ನಿಮ್ಮ ದೇವರಾದ ಯೆಹೋವನಿಗೆ ಹರಕೆ ಹೊತ್ತರೆ ಅದನ್ನು ಸಲ್ಲಿಸಲು ನಿಧಾನ ಮಾಡಬೇಡಿ. ನಿಮ್ಮ ದೇವರಾದ ಯೆಹೋವನು ಅದನ್ನು ನಿಮ್ಮಿಂದ ಕೇಳುವವನಾಗಿದ್ದಾನೆ. ಹರಕೆ ಹೊತ್ತು ಸಲ್ಲಿಸದಿದ್ದರೆ ನೀವು ಪಾಪಮಾಡುವವರಾಗಿದ್ದೀರಿ.
22 ನೀವು ಹರಕೆ ಮಾಡಿಕೊಳ್ಳದಿದ್ದರೆ ಪಾಪಮಾಡುವುದಿಲ್ಲ.
23 ಆದರೆ ನೀವು ಮಾಡಿದ ಹರಕೆಯನ್ನು ಪೂರೈಸಬೇಕು. ನೀವು ಹರಕೆ ಮಾಡುವಂತೆ ದೇವರು ನಿಮ್ಮನ್ನು ಬಲವಂತ ಮಾಡಲಿಲ್ಲವಲ್ಲಾ. ಆದ್ದರಿಂದ ನೀವು ವಾಗ್ದಾನ ಮಾಡಿದ್ದನ್ನು ಪೂರೈಸಬೇಕು.
24 “ಒಬ್ಬನ ತೋಟದೊಳಗಿಂದ ನೀವು ಹಾದುಹೋಗುತ್ತಿರುವಾಗ ನಿಮಗೆ ಬೇಕಾಗುವಷ್ಟು ಹಣ್ಣನ್ನು ಕಿತ್ತು ತಿನ್ನಿ. ಆದರೆ ನೀವು ಮಕ್ಕರಿಯಲ್ಲಿ ತುಂಬಿಸಿಕೊಂಡು ಹೋಗಬಾರದು.
25 ಒಬ್ಬನ ಧಾನ್ಯದ ಹೊಲದಲ್ಲಿ ನೀವು ಹಾದುಹೋಗುತ್ತಿರುವಾಗ ನಿಮ್ಮ ಕೈಯಿಂದ ಹೊಸೆದು ತಿನ್ನುವಷ್ಟು ಧಾನ್ಯವನ್ನು ನೀವು ತಿನ್ನಬಹುದು; ಆದರೆ ನೀವು ಕತ್ತಿಯಿಂದ ಧಾನ್ಯವನ್ನು ಕೊಯಿದು ನಿಮ್ಮೊಂದಿಗೆ ಒಯ್ಯಬೇಡಿ.